ನಾನು ಎಂಟನೇ ಕ್ಲಾಸಿನಲ್ಲಿ ಇದ್ದಾಗ ನನಗೊಂದು ಕೊರಗು ಇತ್ತು. ಅದೇನೆಂದರೆ ನನ್ನ ಬಳಿ ಒಂದೂ ಬಾಕ್ಸ್ ಇರಲಿಲ್ಲ. ನಮ್ಮ ಕ್ಲಾಸಿನಲ್ಲಿ ಬಹುತೇಕ ಎಲ್ಲರ ಬಳಿಯೂ ಪೆನ್ಸಿಲ್ ಬಾಕ್ಸ್ ಇತ್ತು.
ಸಾಮಾನ್ಯವಾಗಿ ನಾನು ನಮ್ಮ ತಂದೆಯವರಿಗೆ ಅಗತ್ಯವಿಲ್ಲದ್ದು ಏನನ್ನೂ ಕೇಳುತ್ತಿರಲಿಲ್ಲ. ಆದರೆ ಈ ವರ್ಷ ಸೆಟ್-ಸ್ಕೇರ್, ಪ್ರೊಟ್ರಾಕ್ಟರ್, ಸ್ಕೇಲ್ ಎಲ್ಲ ಹಿಡಿದುಕೊಳ್ಳಬೇಕಿದ್ದರಿಂದ ಒಂದು ಜಾಮಿಟ್ರಿ ಬಾಕ್ಸ್ ಬೇಕೇ ಬೇಕಿತ್ತು. ಆದರೆ ಹೇಗೆ ಕೇಳುವುದು ಎಂದು ಯೋಚನೆಯಾಗಿತ್ತು 🤔
ಒಮ್ಮೆ ನಾನು ಮತ್ತು ನಮ್ಮ ತಂದೆಯವರು ಒಟ್ಟಿಗೇ ಮಲ್ಲೇಶ್ವರದಲ್ಲಿನ ಒಂದು ಪುಸ್ತಕದ ಅಂಗಡಿಯ ಬಳಿ ನಡೆದುಹೋಗುತ್ತಿದ್ದಾಗ, ಭಯದಿಂದಲೇ, “ಅದೂ, ನಾನೊಂದು ಕೇಳಿದರೆ ಕೊಡಿಸ್ತೀರಾ ಅಂತ ಕೇಳಿದೆ”. ಸಾಮಾನ್ಯವಾಗಿ ಹೀಗೆ ಏನೂ ಕೇಳದ ನಾನು ಏನೋ ಅಗತ್ಯವಾದದ್ದೇ ಕೇಳುತ್ತೇನೆ ಅಂತಲೋ ಏನೋ, ನಮ್ಮ ತಂದೆಯವರು “ಏನು ಬೇಕು?” ಅಂತ ಕೇಳಲು, “ನನಗೊಂದು ಬಾಕ್ಸ್ ಬೇಕು” ಅಂತ ಮೆತ್ತಗೆ ಕೇಳಿದೆ.
ಸಾಮಾನ್ಯವಾಗಿ,”ಏನು?, ಎತ್ತ?, ಏಕೆ?” ಎಂದು ಕೇಳುವ ನಮ್ಮ ತಂದೆಯವರು, ಆ ಸಂಜೆ ಮೊದಲ ಬಾರಿಗೆ ಏನೂ ಮರುಪ್ರಶ್ನೆ ಮಾಡದೆ, ನೇರವಾಗಿ ಪುಸ್ತಕದ ಅಂಗಡಿಗೆ ಕರೆದುಕೊಂಡು ಹೋಗಿ, ಇದ್ದುದರಲ್ಲಿ ಕಡಿಮೆ ರೇಟಿನ ಆದರೆ ಬಾಳಿಕೆ ಬರುವಂತಹ ಈ ಬಾಕ್ಸ್ ಕೊಡಿಸಿದ್ದರು. ಕೊಡಿಸುವಾಗಲೇ ಹುಶಾರಾಗಿಟ್ಟುಕೊಳ್ಳಬೇಕು ಅಂತಲೂ ಕಿವಿಮಾತು ಹೇಳಿದ್ದರು.
ಈ ಬಾಕ್ಸ್ ಒಂದು ರೀತಿ ನನಗೆ “ಅದೃಷ್ಟದ ಬಾಕ್ಸ್” ಆಗಿತ್ತು. ಈ ಬಾಕ್ಸ್ ನನ್ನ ಬ್ಯಾಗ್ ಸೇರಿದಾಗಿನಿಂದ(ಬ್ಯಾಗಿನದ್ದೂ ಒಂದು ಕತೆಯಿದೆ, ಅದನ್ನು ಆಮೇಲೆ ಬರೆಯುವ) ಕಾಕತಾಳೀಯವೇನೋ ಎಂಬಂತೆ ನಾನು ಕ್ಲಾಸಿನಲ್ಲಿ ಮೊದಲ ರ್ಯಾಂಕ್ ಪಡೆಯಲಾರಂಭಿಸಿದೆ. ಅಲ್ಲಿಯವರೆಗೆ ನಾನು ಹೆಚ್ಚೆಂದರೆ ಹತ್ತರೊಳಗೆ ಸುಮಾರಾದ ಒಂದು ರ್ಯಾಂಕ್ ಪಡೆಯುತ್ತಿದ್ದೆ. ರ್ಯಾಂಕ್ ಪಡೆಯುವುದು ಸಿಕ್ಕಾಪಟ್ಟೆ ದೊಡ್ಡ ವಿಷಯ ಅಂತ ನನಗೆ ಎಂದೂ ಅನಿಸಿರಲಿಲ್ಲ. ಆದರೆ ಕಡಿಮೆ ಅಂಕ ಬಂದಾಗ ಬೇಸರವಾಗುತ್ತಿತ್ತು. ಏಕೆಂದರೆ, ಆರನೇ ಕ್ಲಾಸಿನಲ್ಲಿ ಒಮ್ಮೆ ನಮ್ಮ ಟೀಚರ್ ಒಂದು ಕಿವಿಮಾತು ಹೇಳಿದ್ದರು. ಅದೇನೆಂದರೆ ನೀವು ದೇವರಲ್ಲಿ “ಜಾಸ್ತಿ ಮಾರ್ಕ್ ಕೊಡಪ್ಪ, ಫಸ್ಟ್ ರ್ಯಾಂಕ್ ಬರ್ಸಪ್ಪ, ಅಂತ ಯಾವತ್ತೂ ಕೇಳಬೇಡಿ, ಬದಲಿಗೆ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡಪ್ಪ ಅಂತ ಕೇಳಿಕೊಳ್ಳಬೇಕು” ಅಂತ ಹೇಳಿಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿ, ಒಂದು ವೇಳೆ ಕಡಿಮೆ ಅಂಕಗಳು ಬಂದರೆ, “ಮತ್ತಷ್ಟು ಕಷ್ಟ ಪಡೋಕ್ಕೆ ಆಗ್ತಿಲ್ಲವಲ್ಲ” ಅಂತ ಬೇಸರವಾಗುತ್ತಿತ್ತು.
ಈಗ ಬಾಕ್ಸಿನ ವಿಷಯಕ್ಕೆ ಹಿಂದಿರುಗಿದರೆ, ಎಂಟನೇ ಕ್ಲಾಸಿನಲ್ಲಿ ಮೊದಲಾದ ಇದರೊಂದಿಗಿನ ಒಡನಾಟ ನಾನು ಇಂಜಿನಿಯರಿಂಗ್ ಮುಗಿಸುವರೆಗೂ ಇತ್ತು. ನಂತರ ಈ “ಅದೃಷ್ಟದ ಬಾಕ್ಸ್” ನನ್ನ ತಮ್ಮನ ಬ್ಯಾಗ್ ಸೇರಿತು. ನನ್ನ ತಮ್ಮ ಒಮ್ಮೊಮ್ಮೆ ಪೆನ್ಸಿಲ್ಲು, ರಬ್ಬರು ಇವುಗಳನ್ನು ಕಳೆದುಕೊಳ್ಳುತ್ತಿದ್ದ. ಆದರೆ ಈ ಬಾಕ್ಸಿನ ಅದೃಷ್ಟವೋ ಅಥವಾ ನನ್ನ ತಮ್ಮನ ಅದೃಷ್ಟವೋ ಈ ಬಾಕ್ಸು ಮಾತ್ರ ಕಳ್ಳಕಾಕರ ಪಾಲಾಗಲಿಲ್ಲ. ಕಾಲಾಂತರದಲ್ಲಿ ಅವನೂ ಸಿ.ಎ ಮಾಡಿದ. ಈಗ ಇದು ಮತ್ತೆ ನನ್ನ ಕೈಸೇರಿದೆ.
ಬರುವ ತಿಂಗಳು ಈ ಬಾಕ್ಸಿಗೆ ಬರೋಬ್ಬರಿ ೨೧ ವರ್ಷಂಗಳು ತುಂಬಲಿವೆ. ನನ್ನ ಶೈಕ್ಷಣಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಬಾಕ್ಸಿಗೆ ನನ್ನ ನನ್ನಿಗಳು. ಹಾಗೆಯೇ ಆ ದಿನ ನನಗೆ ಈ ಬಾಕ್ಸ್ ಕೊಡಿಸಿದ ನಮ್ಮ ತಂದೆಯವರಿಗೆ ಹೆನ್ನನ್ನಿ.


