ಮೊನ್ನೆ ಹೀಗೆಯೇ ಒಂದು ಸಂದರ್ಭ. ಎಷ್ಟೋ ವರ್ಷಗಳಾದಮೇಲೆ ನಾನು ಅಡುಗೆ ಮಾಡಲೇ ಬೇಕಾದ ಪ್ರಸಂಗ ಬಂದಿತ್ತು. ಹಿಂದಿನ ದಿನ ಕೇವಲ ಅನ್ನ ಮಾಡಿ ಅನ್ನ ಮೊಸರು ತಿಂದು ತೇಗಿದ್ದೆವೆರಾದ್ದರಿಂದ ಈದಿನ “ಬೇರೆ ಏನಾದರು ಮಾಡಿ ತಿನ್ನಲೇ ಬೇಕು” ಎಂದು ನಾಲಗೆ ಚಡಪಡಿಸುತ್ತಿತ್ತು.. ಸರಿ ಬೇರೆ ಏನಾದರು ಮಾಡಬೇಕು ಅಂತನಿಸಿದಾಗ, ತಮ್ಮನಿಗಾಗಿ (ಅವನಿಗೆ ಸ್ವಲ್ಪ ಹುಶಾರಿರಲಿಲ್ಲವಾದ್ದರಿಂದ) ಮೆಣಸಿನ ಸಾರು ಮಾಡೋಣ ಅಂತನಿಸಿತು. ನಾನು ಹೇಗೆ ಅಡುಗೆ ತಯಾರಿಸಿದೆ ಎಂಬುದನ್ನು ಸವಿಯಲು ನೋಡಿ.

೧. ಮಾಮೂಲಿಯ ಹಾಗೆ ಒಂದೂವರೆ ಪಾವು ಅಕ್ಕಿಯನ್ನು ಮೂರು ಬಾರಿತೊಳೆದೆ.

೨. ಈಗ ಈ ಅನ್ನದ ಬಟ್ಟಲಿಗೆ ಬೆರಳುಗಳ ಗೆಣ್ಣು ಮುಳುಗುವಷ್ಟು ನೀರನ್ನು ಹಾಕಿದೆ. ಕುಕ್ಕರಿನಲ್ಲಿ ಮೊದಲು ಪ್ಲೇಟ್ ಇಟ್ಟು, ಪ್ಲೇಟ್ ಮುಳುಗುವಷ್ಟು ನೀರು ಹಾಕಿ, ಗ್ಯಾಸ್ಕೆಟ್ ಇದೆಯೇ ಎಂದು ಖಾತ್ರಿಪಡಿಸಿಕೊಂಡೆ. ನಂತರ ವೇಯ್ಟನ್ನು ಇಟ್ಟು, ಅನ್ನುವನ್ನು ಬೇಯಲು ಇಟ್ಟೆ.

೩. ಈಗಲೇ ಕಷ್ಟದ ಕೆಲಸ. ಬೇಳೆ ಬೇಯಿಸಬೇಕಾಗಿತ್ತು. ಮೂಕ್ಕಾಲು ಲೋಟದಷ್ಟು ತೊಗರಿಬೇಳೆ ತುಂಬಿಕೊಂಡೆ. ಚೆನ್ನಾಗಿ ತೊಳೆದು. ೬ ಲೋಟದಷ್ಟು ನೀರನ್ನು ಬೇಳೆ ಬೇಯಿಸುವ ಬಟ್ಟಲಿಗೆ ಹಾಕಿದೆ. ಒಂದು ಚಮಚ ಎಣ್ಣೆ ಮತ್ತು ಒಂದೇ ಒಂದು ಚೂರು ಹರಿಶಿಣ ಹಾಕಿ, ಅದನ್ನು ಬೇರೆಯದೊಂದು ಕುಕ್ಕಿರಿನಲ್ಲಿ ಬೇಯಲು ಇಟ್ಟೆ.

೪. ಅನ್ನ ಮೂರು ಬಾರಿ ಕೂಗಿದ ಮೇಲೆ ಮತ್ತು ಬೇಳೆ ೬ ಬಾರಿ ಕೂಗಿದ ಮೇಲೆ ಕೆಳಗೆ ಇಡಬೇಕಿತ್ತು.

೫. ಬೇಳೆ ಬೇಯುವ ಮುಂಚೆ, ಇನ್ನಿತರ ಸಲಕರಣೆಗಳನ್ನು ಸಿದ್ದಪಡಿಸಬೇಕಿತ್ತು. ಒಂದು ಬಾಣಲೆಗೆ ಸ್ವಲ್ಪವೇ ಸ್ವಲ್ಪ ಉದ್ದಿನಬೇಳೆ ಮತ್ತು ಕಾಳುಮೆಣಸನ್ನು ಹಾಕಿ ಹುರಿದೆ. ಇದಾದಮೇಲೆ, ಕೆಳಗಿಳಿಸಿ, ಒಂದು ಹಿಡಿ ಕೊಬ್ಬರಿ ಹಾಕಿದೆ. ಅದು ಆರಿದ ನಂತರ ಮಿಕ್ಸಿಗೆ ಹಾಕಿ ಪುಡಿಮಾಡಿಟ್ಟುಕೊಂಡೆ.

೬. ಅನ್ನ ತಯಾರಾಯ್ತು. ಬೇಳೆ ಬೆಂದಿತ್ತು. ಈಗ ಬೇಳೆ ಬಟ್ಟಲನ್ನು ಹೊರತೆಗೆದು, ಚೆನ್ನಾಗಿ ಕುಡಗೋಲಿನಿಂದ ಕಡೆದೆ. ಸ್ವಲ್ಪ ಕಲ್ಲುಪ್ಪು ಮತ್ತು ಮಿಕ್ಸಿಯಲ್ಲಿದ್ದ ಮಿಶ್ರಣವನ್ನು ಸೇರಿಸಿ ಕುದಿಯಲು ಇಟ್ಟೆ. ಇದು ಕುದಿಯುತ್ತಿರಲು ಒಗ್ಗರಣೆ ತಯಾರಿಟ್ಟುಕೊಂಡಿರಬೇಕಿತ್ತು.

೭. ಮತ್ತೊಂದು ಸಣ್ಣ ಒಗ್ಗರಣೆ ಸೌಟಿಗೆ, ಸ್ವಲ್ಪವೇ ಸ್ವಲ್ಪ ಎಣ್ಣೆ ಹಾಕಿದೆ. ಕಾದ ನಂತರ ಸ್ವಲ್ಪ ಸಾಸಿವೆ, ಜೀರಿಗೆ, (ಕಡ್ಲೆಬೇಳೆ ಉದ್ದಿನಬೇಳೆ) ಹಾಕಿದೆ. ಹಾಗೆಯೇ, ಮೂರು ಒಣಮೆಣಸಿನಕಾಯಿಯನ್ನು ಸಣ್ಣದಾಗಿ ತುಂಡರಿಸಿ ಅದನ್ನು ಒಗ್ಗರಣೆ ಸೌಟಿಗೆ ಹಾಕಿದೆ. ಇದು ಘಂ ಅಂತ ಪರಿಮಳ ಬೀರುತ್ತಿದ್ದಾಗ, ಒಗ್ಗರಣೆ ಆರಿಸಿದೆ. ಇದನ್ನು ಕುದಿಯುತ್ತಿದ್ದ ಬೇಳೆಬಟ್ಟಲಿಗೆ ಹಾಕಿದೆ.. ಮತ್ತೊಂದೈದು ನಿಮಿಷ ಕುದಿಸಿದೆ.

೮. ಸರಿ, ಎಲ್ಲರನ್ನೂ ಊಟಕ್ಕೆ ಕರೆದೆ, ಊಟ ಹಾಕಿ, ನಾನೂ ಊಟ ಮಾಡಿ, ಇನ್ನಿತರ ಕೆಲಸ ಮಾಡಲು ಅನುವಾದೆ.

😉

Advertisements