ಹೀಗೊಂದು ನಗುಪುರಾಣ

ನನ್ನನ್ನು ಸ್ನೇಹಿತರು, ಹೊಗಳುವುದಕ್ಕೂ ಮತ್ತು ಬಯ್ಯುವುದಕ್ಕೂ ಒಂದೇ ವಾಕ್ಯ ಬಳಸುತ್ತಾರೆ. “ಓ ಅವ್ನಾ ಅದೇ ಯಾವಾಗ್ಲೂ ನಗ್ತಾ ಇರ್ತಾನಲ್ಲ !!!” ಆ ರವಿಚಂದ್ರನ್ನು ಅದ್ಯಾವಾಗ್ಲೋ, ಯುಗಪುರುಷ ಮಾಡ್ದ ಆದ್ರೆ, ಆದ್ರೆ ನಾನು, ನಗುಪುರುಷ ಅನ್ನೋ ಸಿನಿಮಾ ತೆಗೀಬೇಕು ಅಂತ ಇದ್ದೀನಿ. ಫೈನಾನ್ಸ್ ಮಾಡ್ತೀರೇನೋ ನೋಡಿ… ಈ ನಗು ಅನ್ನೋದು ಇದೆಯಲ್ಲ, ಇದೊಂದು ದಿವ್ಯೌಷಧಿ ಎಂದು ಹೇಳುತ್ತಾರೆ. ಸಕಲ ನೋವುಗಳಿಗೂ ನಗುವು ರಾಮಬಾಣವಂತೆ. ನೀವು ಇದನ್ನು ನಂಬ್ತೀರೋ, ಬಿಡ್ತೀರೋ ನನ್ನ ನಗು ಪುರಾಣವನ್ನಂತು ಕೇಳಲೇಬೇಕು.

ತುಂಬಾ ಹಿಂದೆ, ನಾನು ನಗ್ತಾ ಇದ್ದೀನೋ, ಅಳ್ತಾ ಇದ್ದೀನೋ ಅನ್ನೋದೇ ಗೊತ್ತಾಗ್ತಾ ಇರ್ಲಿಲ್ವಂತೆ… ನನ್ನ ಕಣ್ಣಿನಲ್ಲಿ, ಅಳುವಾಗ ಬರುವ ನೀರಿಗಿಂತ, ನಗುವಾಗ ಹೆಚ್ಚು ಬರ್ತಿತ್ತಂತೆ.. ಏನ್ಮಾಡಲೀ, ನಾನು ಏನ್ಮಾಡಲೀ !!!! ಸರಿ, ಹೀಗೆಯೇ ನನ್ನ ಬದುಕಿನ ಜಟಕಾ ಬಂಡಿಯೂ ಓಡುತ್ತಿದ್ದಾಗ, ಒಮ್ಮೆ ಬೇಸಗೆಯ ರಜದಲ್ಲಿ, ನಮ್ಮ ತಂದೆಯವರು, ಮಕ್ಕಳಲ್ಲಿ ವೈಚಾರಿಕತೆ ಬೆಳೆಯಲಿ ಎಂದು ವಿಜ್ಞಾನ ಶಿಬಿರಕ್ಕೆ ಸೇರಿಸಿದ್ದರು. ಆ ಶಿಬಿರದ ಕೊನೆಯಲ್ಲಿ ಎರಡು ನಾಟಕ ಇದ್ದವು. ಒಂದು ಗ್ರಹಣ ಹೇಗೆ ಆಗುತ್ತದೆ ಎಂಬುದರ ಕುರಿತಾಗಿ. ಗ್ರಹಣದ ದಿನ ಅಜ್ಜಿ ಗ್ರಹಣ, ಸ್ನಾನ ಮಾಡ್ಬೇಕು ಹಾಗೆ ಹೀಗೆ ಅಂತ ಓಡಾಡ್ತಾ ಇರ್ತಾಳೆ. ಆದರೆ ಅವಳ ಮೊಮ್ಮಗ, ಅಯ್ಯೋ ಅಜ್ಜಿ ಗ್ರಹಣದ ನಂತರ, ಸ್ನಾನ ಏನ್ ಮಾಡ್ಬೇಕಾಗಿಲ್ಲ, ಅದು ಸ್ವಾಭಾವಿಕ ಪ್ರಕ್ರಿಯೆ ಹೀಗೆ..ಹಾಗೆ ಹೀಗೆ… ಈ ನಾಟಕದ ನಂತರ, “ಅಲೆಗ್ಸಾಂಡರ್ ಮತ್ತು ಅರಿಸ್ಟಾಟಲ್” ಎಂಬ ಮತ್ತೊಂದು ನಾಟಕ ಇತ್ತು. ಏನಪ್ಪಾ ಅಂದ್ರೆ, ಅಲೆಗ್ಸಾಂಡರ್ ಇಹಲೋಕ ತ್ಯಜಿಸಿರುತ್ತಾನೆ. ಆ ಸುದ್ದಿ ಅರಿಸ್ಟಾಟಲಿಗೆ ತಿಳಿಯುತ್ತದೆ. ಆಗ ಅವನು ವ್ಯಕ್ತಪಡಿಸುವ ಶೋಕವನ್ನು ಬಿತ್ತರಿಸಬೇಕಾಗಿತ್ತು. ಹೇಗೆ ಡೈಲಾಗ್ ಬಿಡಬೇಕು ಅಂತ ಶಿಬಿರದ ಮೇಡಮ್ಮು ಪಾಪ ಹಾವ ಭಾವ ಬೆರೆಸಿ ಹೇಳಿಕೊಡೋಕ್ಕೇ ಅಂತ ಹೋದ್ರು ನೋಡಿ….. ಹೀಗಿತ್ತು ಆ ಡೈಲಾಗ್..

“ಅಯ್ಯೋ ದೈವವೇ!!!!! ಇದೇನು, ಆ ಅಲೆಗ್ಸಾಂಡರ್ ಕಾಲವಾದನೇ, ಸತ್ತುಹೋದನೇ….!!!” ಈ ಡೈಲಾಗ್ ಯಾವ ಕ್ಷಣದಲ್ಲಿ ಮೇಡಮ್ ಬಾಯಿಂದ ಹೊರಬಂದಿತೋ, ಅದೆಲ್ಲಿತ್ತೋ ನನ್ನ ನಗು, ಬಂತು ನೋಡಿ. ನಾನು ನಕ್ಕಿದ್ದನ್ನು ನೋಡಿ, ಎಲ್ಲರೂ ನಕ್ಕರು. ಮೇಡಮ್ಮೂ ನಕ್ಕರು. ಇದರಲ್ಲೇನು ಸ್ವಾರಸ್ಯ ಅಂತೀರಾ.. ಒಂದರ್ಧ ನಿಮಿಷ ಆದಮೇಲೆ ಎಲ್ಲರೂ ಸುಮ್ಮನಾದರು. ಆದರೆ ನನ್ನ ನಗು ನಿಲ್ತಾನೇ ಇಲ್ಲ.. ಹೇಗಿದ್ರೂ, ಅದು ವಿಜ್ಞಾನ ಶಿಬಿರ, ಅಲ್ಲೇನಾದ್ರು ಗುಟ್ಟಾಗಿ ಲಾಫಿಂಗ್ ಗ್ಯಾಸ್ ತಯಾರಿಸ್ತಾ ಇದ್ರೋ ಏನೋ ಗೊತ್ತಿಲ್ಲ…. ಸುಮಾರು ಎಂಟು ನಿಮಿಷವಾದರೂ ನಗು ನಿಲ್ಲದ ಕಾರಣ, ಅವರಿಗೆಲ್ಲ ಮುಜುಗರವಾಗಬಾರದು ಅಂತ ನಾನೇ ಆಚೆಬಂದುಬಿಟ್ಟೆ!!! ಮನೆಗೆ ಹೋಗುವ ದಾರಿಯುದ್ದಕ್ಕೂ ನಗ್ತಾನೇ ಹೋಗಿದ್ದೀನಿ …. ಮನೆಗೆ ಹೋದ ಮೇಲೂ ನಕ್ಕಿದ್ದೀನಿ… ಎಷ್ಟು ಹೊತ್ತು ಅಂತೀರಾ… ನಲವತ್ತು ನಿಮಿಷ (ಯೆಸ್… 40).. ನಿಜ ಹೇಳಿ, ನೀವು ಯಾವತ್ತಾದ್ರು ನಲವತ್ತು ನಿಮಿಷ ನಿಲ್ಲಿಸದೆ ನಕ್ಕಿದ್ದೀರಾ….!!!

ಮುಂದಿನ ವರ್ಷದಿಂದ, ನನ್ನ ಹೆಸರಿನ ಜಾಗದಲ್ಲಿ ಇದ್ದ ಬದ್ದ ಟೂತ-ಪೇಸ್ಟುಗಳೆಲ್ಲ ಜಾಗ ಪಡೆದವು. ಕ್ಲೋಸ್-ಅಪ್, ಕೋಲ್ಗೇಟ್, ಸಿಬಾಕಾ ಸ್ಮೈಲ್ ಹೀಗೆ…. ಏನ್ಮಾಡೋದು!! ಕರ್ಮ ಅನುಭವಿಸಲೇಬೇಕಲ್ವೇ !!! ಇದಾಗಿ, ಮುಂದೆ ಪಿಯುಸಿಯಲ್ಲಿ ಅತ್ಯಂತ ಸ್ಟ್ರಿಕ್ಟ್ ಪ್ರೊಫೆಸರ್ ಒಬ್ಬರು ಬಾಟನಿ ಲ್ಯಾಬಿನ ಇನ್ಚಾರ್ಜ್ ಆಗಿ ಬಂದರು. ಅವರು ಎಷ್ಟು ಸ್ಟ್ರಿಕ್ಟ್ ಎಂದರೆ ಎಲ್ಲರೂ(ಅಂದರೆ, ಕ್ಲಾಸಿನಲ್ಲಿ ಇರುವ ಪುಂಡು-ಪೋಕರಿಗಳೂ) ಅವರನ್ನು ನೋಡಿ ಹೆದರುತ್ತಿದ್ದರು. ಒಮ್ಮೆ ಅವರು ನನ್ನನ್ನು ನೋಡಿ, ಎಲ್ಲರ ಮುಂದೆ, ಇಂಗ್ಲೀಶನಲ್ಲಿ, “ನಾನು ಎಷ್ಟೊಂದು ಸ್ಟ್ರಿಕ್ಟು, ಆದರೆ ಇವನ ಸ್ಮೈಲಿಂಗ್ ಮುಖ ನೋಡುದ್ರೆ, ಸ್ಟ್ರಿಕ್ಟನೆಸ್ ಎಲ್ಲ ಹೋಗಿಬಿಡತ್ತೆ” ಅಂತ ಹೇಳಿದ್ರು. ನನಗೆ ಆ ದಿನ ಸ್ವರ್ಗಕ್ಕೆ ಮೂರೇ ಗೇಣು. ಅತ್ಯಂತ ಸ್ಟ್ರಿಕ್ಟ್ ಆಫೀಸರ್ ಕಯ್ಯಲ್ಲಿ ಹೊಗಳಿಸಿಕೊಂಡೆ ಅಂತ. ನನ್ನ ಹಿಂದಿನ ಜನ್ಮದ ಪುಣ್ಯವೋ ಏನೋ, ಫೈನಲ್ ಎಗ್ಸಾಮಿನ ವೈವಾ-ವೋಸಿಗೆ ಅವರೇ ಬಂದಿದ್ರು. ಬೇರೆಯವರಿಗೆ ಅವರನ್ನು ಕಂಡರೆ ಸಿಕ್ಕಾಪಟ್ಟೆ ಭಯ. ಆದರೆ ನನಗೂ ಹಿರಿಹಿರಿಹಿಗ್ಗು..

ಇಷ್ಟಕ್ಕೆ ಮುಗಿಯಿತು ಅಂತ ಅಂದ್ಕೋಬೇಡಿ. ಮುಂದೆ, ಕಾಲಾಂತರದಲ್ಲಿ, ನಾನೂ ಕೂಡ ಇಂಜಿನಿಯರಿಂಗ್ ಕೊನೆಯ ಸೆಮಿಸ್ಟರ್ ಹತ್ತಿದೆ. ಆಗ ಪ್ರಾಜೆಕ್ಟ್ ಮಾಡಬೇಕಿತ್ತಲ್ವೇ… ಆಗ ಒಬ್ಬರು ಬೇರೆ ಕಾಲೇಜಿನ ಹಿರಿಯ ಪ್ರೊಫೆಸರ್ ಅವರನ್ನು ಭೇಟಿಮಾಡಿ, ನಮಗೊಂದು ಪ್ರಾಜೆಕ್ಟ್ ಕೊಡಿ ಅಂತ ಕೇಳೋಕ್ಕೆ ಹೋಗಿದ್ವಿ. ಅವರು, ಪ್ರಾಜೆಕ್ಟೇ ಕೊಡ್ತೀನಿ, ಪ್ರಾಜೆಕ್ಟ್ ಇದು, ನೀವು ಇದನ್ನು ಮಾಡ್ಬೇಕು, ಹಾಗೆ ಹೀಗೆ ಅಂತ ವಿವರಣೆ ಕೊಡ್ತಾ ಇದ್ರು. ಆಗ ನನ್ನ ಸ್ಮೈಲಿಂಗ್ ಫೇಸ್ ನೋಡಿ…. ನಾನ್-ಸೆನ್ಸ್. ನಾನು ಎಕ್ಸಪ್ಲೇನ್ ಮಾಡ್ಬೇಕಾದ್ರೆ, ನೀನು ನಗ್ತಾ ಇರ್ತೀಯಾ.. ಹಾಗೆ ಹೀಗೇ ಬೈದು.. ಎಚ್ಚರಿಕೆ ಕೊಟ್ರು, ಮುಂದಿನ ಬಾರಿ ಬರುವಾಗ, ಇಷ್ಟೆಲ್ಲ ಓದ್ಕೊಂಡು ಬನ್ನಿ ಅಂತ ಹೇಳಿಕಳುಹಿಸಿದ್ರು!!! ಅವರು ಕೊಟ್ಟ ಎಚ್ಚರಿಕೆ ಎಷ್ಟು ಪರಿಣಾಮಕಾರಿಯಾಗಿತ್ತು ಅಂದ್ರೆ !!!!!….ನನಗೇನೂ ಅನ್ನಿಸಲೇ ಇಲ್ಲ. ಆದರೆ ನಮ್ಮ ಟೀಮೇಟ್ಸಿಗೆ ನಡುಕ ಹತ್ಕೊಂಡುಬಿಡ್ತು. ಅವರು, ಲೋ, ಏನೋ ಇದು, ಬರೀ ಒಂದು ಸ್ಮೈಲಿಂಗ್ ಫೇಸಿಗೇ ಇಷ್ಟೊಂದು ಬೇದ್ರೆ, ಆಮೇಲೇನೋ ಗತಿ, ಅಂದ್ಬಿಟ್ಟು…. ಈ ಪ್ರಾಜೆಕ್ಟೇ ಬೇಡ, ಬೇರೆ ಯಾವ್ದಾದ್ರು ಮಾಡೋಣ ಅಂದ್ಬಿಟ್ರು..… ಸರಿ ಹಾಗೆಯೇ ಮಾಡಿದ್ವಿ ಅಂತಿಟ್ಕೊಳ್ಳಿ…

ಹೀಗೆ…ಮತ್ತೂ…ಕಾಲಾಂತರದಲ್ಲಿ… ಮದುವೆ ಆಯ್ತು ನೋಡಿ.. ಒಮ್ಮೆ ಹೆಂಡತಿಯ ಪೂರ್ವಾಶ್ರಮದ 😉 ಟೈಲರ್ ಅಂಗಡಿಗೆ ಹೋಗಬೇಕಾದ ಪ್ರಸಂಗ ಬಂತು. ಟೈಲರ್ ಅಂಗಡಿಗೆ ಹೋದಾಗಲೆಲ್ಲ ನಾನು ಆಚೆಯೇ ನಿಂತಿರುತ್ತಿದ್ದೆ… ಒಮ್ಮೆ ಆ ಅಂಗಡಿಯ ಓನರ್ರು ನನ್ನನ್ನು ಒಳಗೆ ಕರೆದ. “ನಿಮ್ಮ ಮನೆಯವರು, ಚಿಕ್ಕವರಿದ್ದಾಗಿನಿಂದಲೂ ಇದೇ ಅಂಗಡಿಗೆ ಬರ್ತಾರೆ… ನಿಮ್ಮನ್ನು ಭೇಟಿ ಮಾಡಿದ್ದು ತುಂಬಾ ಸಂತೋಷ” ಹಾಗೆ… ಹೀಗೆ ಹೇಳಿದ… ಆಮೇಲೆ…. ನಮ್ಮ ಮನೆಯವರೆಡೆಗೆ ತಿರುಗಿ, “ನಿಮ್ಮ ಮನೆಯವರು ಯಾವಾಗ್ಲು, ನೆಗಾಡ್ತಾ ಇರ್ತಾರೆ” ಅನ್ನೋದೇ !!!! ಸಿಟ್ಟುಮಾಡಿಕೊಂಡ ಹೆಂಡತಿ.. ಆ ಅಂಗಡಿಗೆ ಹೋಗೋಕ್ಕೆ ಈಗ ಹಿಂದುಮುಂದು ನೋಡ್ತಾಳೆ.… ಅದಕ್ಕೆ ಪೂರ್ವಭಾವಿಯಾಗಿ ಈ ನಡುವೆ ಯಾವ್ದಾದ್ರು ಬಟ್ಟೆ ಹೊಲಿಯೋಕ್ಕೆ ಕೊಡೋಕ್ಕೆ ಹೋಗ್ಬೇಕಿದ್ರೆ ಅವಳು ನನ್ನನ್ನು ಕರೆಯೋದೇ ಇಲ್ಲ !!! ನನಗೂ ಇದೇ ಬೇಕಿತ್ತು ಅನ್ನಿ, ಅದು ಬೇರೆಯದೇ ವಿಷಯ..

ನನಗೆ ಈ ನಗು ಕಲಿಸಿಕೊಟ್ಟವರು ಯಾರು ಅಂತ ಯೋಚಿಸೋಕ್ಕೆ ಶುರುಮಾಡಿದೆ. ಬಹುಶಃ ಸಿಹಿಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಫಣಿ ರಾಮಚಂದ್ರ, ನರಸಿಂಹ ರಾಜು, ದ್ವಾರಕೀಶು, ಸೀತಾರಾಮು ಇವರುಗಳ ಬಳುವಳಿಯೋ ಏನೋ.. ಅವರ ಸೀರಿಯಲ್ಲುಗಳು, ಸಿನಿಮಾಗಳನ್ನು ನೋಡಿ ಹೀಗಾಗಿರಬೇಕು…..ಅಂತ ಅಂದ್ಕೊಳ್ತಾ ಇದ್ದೆ…ಆಮೇಲ್ ಗೊತ್ತಾಯ್ತು ನೋಡಿ…ಇದೆಲ್ಲ “ಶುಕ್ಲಾಂಬರದರಂ…….”ನ ಕಿತಾಪತಿ …ಅಲ್ಲ, ನೀವೇ ಹೇಳಿ…ಪ್ರಸನ್ನವದನನ್ನ ಧ್ಯಾನ ಮಾಡ್ತಾ ಇದ್ರೆ, ನಗುಮುಖ ಬರದೆ ಇನ್ನೇನಾಗತ್ತೆ ಹೇಳಿ…ಅದಕ್ಕೆ… ಇನ್ಮುಂದೆ, ನರಸಿಂಹನ ಜಪ ಮಾಡ್ಬೇಕು ಅಂತ ಇದ್ದೀನಿ. ಆದರೆ, ಎಲ್ಲಿ ಉಗ್ರನಾಗಿರುವ ಆ ನರಸಿಂಹ ನನ್ನಂತೆ ನಗುಮುಖ ಆಗ್ಬಿಡ್ತಾನೋ ಅಂತ ಹೆದರೆ, ಸುಮ್ಮನಿದ್ದೀನಿ !!!!!

ಸರಿ ಪಾಪ ಇಲ್ಲಿಯ ತನಕ, ನನ್ನ ನಗುಪುರಾಣ ಓದಿ ಸುಸ್ತಾಗಿಲ್ಲ ಅಂದ್ರೆ…. ಸದ್ಯಕ್ಕೆ ಈ ಕೆಳಗಿನ ಹಾಡುಗಳನ್ನು ಕೇಳಿ ಖುಷಿಪಡಿ..

ನಗು ನಗುತಾ ನಲೀ ನಲೀ ಏನೇ ಆಗಲಿ

ನಗುವ ನಯನ ಮಧುರ ಮೌನ

ನಗೂ ಎಂದಿದೇ ಮಂಜಿನ ಬಿಂದೂ… ನಗೂ ಎಂದಿದೇ ನಾಳೆ ಎಂದೂ…

ನೋಟದಾಗೆ ನಗೆಯ ಮೀಟಿ

ತೇರ ಏರಿ ಅಂಬರದಾಗೆ ನೇಸರ ನಗುತಾನೆ — ಇದನ್ನಂತು ನೀವು ಕೇಳಲೇಬೇಕು. ಪ್ರವೀಣ್ ಗೋಡ್ಖಿಂಡಿಯವರ ಕೊಳಲು ವಾದನ

Advertisements
ದೃಶ್ಯಾವಳಿ | This entry was posted in Uncategorized. Bookmark the permalink.

ಹೀಗೊಂದು ನಗುಪುರಾಣ ಗೆ ಒಂದು ಪ್ರತಿಕ್ರಿಯೆ

  1. Pramod ಹೇಳುತ್ತಾರೆ:

    ಒಳಗೊಳಗೆ ನಗ್ತಾ ನಗ್ತಾ ಲೇಖನ ಓದಿ ಮುಗಿಸ್ದೆ. 🙂 ಖುಶಿ ಒಳಗಿ೦ದ ತು೦ಬಿ ಹೊರಗೆ ಬರ್ಬೇಕು ಅಲ್ವೇ. ಒಳ್ಳೆಯ ಲೇಖನ.
    ಅದ್ಭುತ ಹಾಡುಗಳಿಗೆ ಒ೦ದು ಪ್ರಣಾಮ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s