ಮೊಟ್ಟಮೊದಲಿಗೇ ಹೇಳಿಬಿಡುತ್ತೇನೆ. ನಾನು ಪರ್ವತಾರೋಹಿ ಅಂತ. ಆದರೆ ಬೆಟ್ಟಗುಡ್ಡ ಸುತ್ತಾಡೋಕ್ಕೆ ತುಂಬಾ ಇಷ್ಟ. ನಾನು ಹತ್ತಿರಬಹುದಾದ ಬೆಟ್ಟಗಳೆಂದರೆ, ಚಾಮುಂಡಿ ಬೆಟ್ಟ, ದೇವರಾಯನದುರ್ಗ, ಶಿವಗಂಗೆ ಅಷ್ಟೇ. ಏನೋ ಕೈಲಾದ ಮಟ್ಟಿಗೆ ಸಣ್ಣಸಣ್ಣ ಕಾಲುದಾರಿಗಳಲ್ಲಿ ನಡೆದೆನೆಂದರೆ, ಅದೇ ನನಗೆ ಏನೋ ಸಮಾಧಾನ.

ನಾನು, ಅಮೇರಿಕಾಗೆ ಬಂದಾಗಿನಿಂದ, “ಮಿಶನ್ ಪೀಕ್ ಪರ್ವತಶ್ರೇಣಿಯನ್ನು ಹತ್ತಬೇಕು”, ಎಂಬ ಆಸೆ ತುಂಬಾ ಇತ್ತು. ಮಿಶನ್ ಪೀಕ್ ಎನ್ನುವುದು, ಅಮೇರಿಕಾದ ಕ್ಯಾಲಿಫೋರ್ನಿಯಾದ ಫ್ರೀಮಾಂ

ಟ್ ನಗರದ ಹತ್ತಿರದಲ್ಲಿರುವ ಒಂದು ಪರ್ವತ ಶ್ರೇಣಿ. ನಾನು ಸದ್ಯಕ್ಕೆ ವಾಸವಿದ್ದ ಸನ್ನಿವೇಲ್ ನಗರದಿಂದ ಹೊರಟು, ಮಿಲ್ಪಿಟಾಸ್ ನಗರದಲ್ಲಿ ಸ್ನೇಹಿತರೊಡನೆ ಜೊತೆಗೂಡಿ, ಸಾಹಸ ಮಾಡಿಯೇ ಬಿಡೋಣ ಅಂತ ಹೊರಟೆ. ಹೇಗಿದ್ದರೂ ಮಾರನೆಯ ದಿನ, ಜುಲೈ ೪, ಅಮೇರಿಕಾದ ಇಂಡಿಪೆಂಡೆನ್ಸ್ ಡೇ ಇತ್ತು. ಒಂದು ವೇಳೆ, ಸುಸ್ತಾದರೂ ಮಾರನೆಯ ದಿವಸ ಸ್ವಲ್ಪ ಸುಧಾರಿಸಿಕೊಳ್ಳಬಹುದು ಅಂತ ದೊಡ್ಡ ಮನಸ್ಸು ಮಾಡಿ ಹೊರಟೆ.

mission-peak.png

ಮಿಶನ್ ಪೀಕ್ ತಲುಪಿದ ತಕ್ಷಣ ನನಗೆ ತಿಳಿದದ್ದು, ಇದು ನಾನು ಈ ಹಿಂದೆ ನೋಡಿರುವ ಬೆಟ್ಟಗಳಂತೆ ಇಲ್ಲ. ಇದು ಕಾಡಿನಿಂದ ಕೂಡಿರುವ ಪರ್ವತಶ್ರೇಣಿಯಲ್ಲ.  ಇಲ್ಲಿ, ಇಡೀ ಪರ್ವತವೇ ಬೋಳು, ಬೋಳು. ಇಡೀ ಮಾರ್ಗಮಧ್ಯೆ ಎರಡು ಅಥವಾ ಮೂರು ಮರಗಳು ಸಿಕ್ಕರೆ ಅದೇ ಪುಣ್ಯ. ಪಾದಚಾರಿಗಳಿಗೆ(ಅಥವಾ ಪರ್ವತಾರೋಹಿಗಳಿಗೆ) ನೆರವಾಗಲೆಂದು ಸ್ವಲ್ಪ ದೊಡ್ಡದೇ ಆದ ಕಾಲುದಾರಿ ಮಾಡಿದ್ದಾರೆ. ಅಲ್ಲಿ ಸೂಚಿಸಿರುವ ಮಾರ್ಗದಲ್ಲಿಯೇ ನಾವು ನಡೆಯಬೇಕು. ಮಾರ್ಗ ಮಧ್ಯದಲ್ಲಿ ಸುಸ್ತಾದರೆ ಕುಳಿತುಕೊಳ್ಳಲು ಅಲ್ಲಲ್ಲಿ ಬೆಂಚುಗಳನ್ನು ಹಾಕಿದ್ದಾರೆ. ಆದರೆ ನೆರಳಿಲ್ಲ. ನಾವು ಬಿಡುಬಿಸಿಲಿನಲ್ಲಿಯೇ ಮುಂದೆ ಸಾಗಬೇಕು.

ನನಗೆ ಒಮ್ಮೆಲೇ ಬೆಟ್ಟವನ್ನು ಹತ್ತುವುದು ಕಷ್ಟವಾಯಿತು. ನಡುವಲ್ಲಿ ಎರಡು ಮರ ಸಿಗುತ್ತದೆ. ಮೊದಲನೇ ಮರದ ಕೆಳಗೆ ಸ್ವಲ್ಪ ದಣಿವಾರಿಸಿಕೊಂಡು, ನಂತರ ಮುಂದೆ ಸಾಗಿದೆ. ಎರಡನೇ ಮರ ತಲುಪುವ ವೇಳಗೆ ಇನ್ನು ಸಾಧ್ಯವಿಲ್ಲವೆಂದು ತೀರ್ಮಾನಿಸಿ ಸ್ವಲ್ಪ ಹೊತ್ತು ದಣಿವಾರಿಸಿಕೊಂಡು ಹಿಂದಿರುಗೋಣ ಅಂತ. ಯೋಚನೆ ಬಂತು. ಹಾಗೆಯೇ ಆ ಮರದ ಕೆಳಗೆ ಕುಳಿತು ಯೋಚಿಸುತ್ತಿದ್ದಾಗ, ಅದರ ಎಲೆಗಳನ್ನು ಗಮನಿಸಿದೆ. ನಮ್ಮ ಮನೆಯಲ್ಲಿರುವ ಪನ್ನೇರಳೆ ಹಣ್ಣಿನ ಮರದ ಎಲೆಯನ್ನು ಹೋಲುತ್ತಿತ್ತು. ಹಾಗೆಯೇ ಮತ್ತೊಂದು ಬಿಲ್ವ ಪತ್ರೆಯ ತ್ರಿದಳದ ರೂಪದಲ್ಲಿತ್ತು. ನೋಡಿ ಸ್ವಲ್ಪ ಖುಷಿಯಾಯ್ತು. ಹಾಗೆಯೇ ಹತ್ತು ನಿಮಿಷ ಕಳೆಯುವ ಹೊತ್ತಿಗೆ, ಏನೇ ಆಗಲಿ ರಾತ್ರಿ ಆದರೂ ಪರವಾಗಿಲ್ಲ, ಈ ಶ್ರೇಣಿಯನ್ನು ಹತ್ತಿಯೇ ಹಿಂದಿರುಗಬೇಕು ಅಂತ ತೀರ್ಮಾನಿಸಿ ಮತ್ತೆ ನಡೆಯಲು ಶುರುಮಾಡಿದೆ.

(ಚಿತ್ರ – ಹತ್ತುವ ಮೊದಲು ಒಂದು ರಿಸ್ಟ್ ಬ್ಯಾಂಡ್ ಅನ್ನು ಕೈಗೆ ಕಟ್ಟಿಕೊಂಡಿದ್ದೆ, ಕೆಳಗೆ ಬಂದನಂತರ ತೆಗೆದ ಸ್ಕೀನ್-ಶಾಟ್)

ಮುಂದಿನ ಒಂದೂಕಾಲು ಗಂಟೆ ನಡೆಯುವುದನ್ನು ನಿಲ್ಲಿಸಲಿಲ್ಲ. ಏಕಂದರೆ, ಮಾರ್ಗದಲ್ಲಿ ಯಾವ ನೆರಳೂ ಸಿಗುವುದಿಲ್ಲ. ಕಟ್ಟಕಡೆಯ ೨೦ ನಿಮಿಷಗಳು ನಿಜಕ್ಕೂ ನನ್ನನ್ನು ಪರೀಕ್ಷೆಗೆ ಗುರಿಮಾಡಿತು. ಶ್ರೇಣಿಯ ತುದಿ ಕಾಣಿಸುತ್ತದೆ, ಆದರೆ ಹಾದಿ ಸ್ವಲ್ಪ ಕಠಿಣ. ಸರಿ ಏನಾದರೂ ಆಗಲಿ ಅಂತ ಒಂದೊಂದೇ ಹೆಜ್ಜೆ ಇಡುತ್ತ ಸಾಗಿ ಕಡೆಗೂ ತಲುಪಿದೆ. ಅಲ್ಲಿ ಹೋಗಿ, ಮತ್ತದೇ ಬಿಸಿಲಿನಲ್ಲಿಯೇ ಕುಳಿತು, ಫೋಟೋ ಕ್ಲಿಕ್ಲಿಸಿಕೊಂಡು ಹಿಂದಿರುಗಲು ಅನುವಾದೆ.

ಬರುವಾಗ ಮತ್ತದೇ ಮರದ ಕೆಳಗೆ ಕುಳಿತು, ಅದಕ್ಕೆ “ನನ್ನಿ” ಹೇಳಿ, ಒಂದೆರೆಡು ದ್ರಾಕ್ಷಿ ಮತ್ತು ಕಿತ್ತಳೆಯ ಎಸಳನ್ನು ಬಾಯಿಗೆ ಹಾಕಿಕೊಂಡು ಪಯಣ ಮುಂದುವರೆಸಿದೆವು.

ಮನಸ್ಸು ತುಂಬಾನೇ ನಿರಾಳವಾಯಿತು.

ನಾನು ಯಾವುದಕ್ಕೂ ಇರಲಿ ಅಂತ, ಕಿತ್ತಳೆ, ಆಪಲ್, ಕ್ಯಾರೆಟ್, ಟೊಮ್ಯಾಟೋ ಇಟ್ಟುಕೊಂಡು ಹೋಗಿದ್ದೆ. ಹಿಂದಿರುಗಿ ಬಂದಮೇಲೆ ಒಂದೊಂದೇ ತಿಂದು ತೇಗಿ, ತೃಪ್ತಿಪಟ್ಟೆ.

 

Advertisements