ಅಮ್ಮ ನೆನಪಾದಾಗ ಏನು ಮಾಡಬೇಕು

ನಾನು ಹೀಗೇ ಆಲೋಚನೆ ಮಾಡ್ತಾ ಇದ್ದೆ. ಅಮ್ಮ ನೆನಪಾದಾಗ ಏನು ಮಾಡಬೇಕು ಅಂತ.

ಸರಿ ಅದೂ ಇದೂ ಯೋಚ್ನೆ ಮಾಡೀ ಮಾಡೀ ಸುಸ್ತಾದೆ. ಏನೂ ಹೊಳೀಲಿಲ್ಲ. ಹೊಟ್ಟೆ ಬೇರೆ ಚುರ್ರ್ ಗುಟ್ತಾ ಇತ್ತು. ಸರಿ ಏನು ಅಡುಗೆ ಮಾಡೋದು ಅಂತ ಯೋಚಿಸ್ತಿರಬೇಕಾದರೆ, “ಏನೂ ಬೇಡ, ಅನ್ನ ಸಾರು ಮಾಡಿಕೊಳ್ಳೋಣ” ಸಾಕು ಅಂತ ತೀರ್ಮಾನ ಮಾಡಿ, ಒಂದು ಸಣ್ಣ ಹಿಡಿ ಅಕ್ಕಿ ಮತ್ತು ಚಟಾಕಿನಷ್ಟು ಬೇಳೆ ಮತ್ತು ಅರ್ಧ ಟೊಮ್ಯಾಟೋ ಬೇಯಕ್ಕಿಟ್ಟು ಬಂದೆ. ಇದು ಬೆಂದು ಕೂಗುವಷ್ಟರಲ್ಲಿ ಅಮ್ಮ ನೆನಪಾಗುವಂತಹ ಕೆಲಸ ಮಾಡೋಣ ಅಂತ ಮತ್ತೆ ಮತ್ತೆ ಅದೇ ಯೋಚನೆ ಮಾಡೋಕ್ಕೆ ಶುರುಮಾಡಿದೆ.

ಸಾಮಾನುಗಳನ್ನೆಲ್ಲ ಸರಿಯಾದ ಜಾಗಗಳಿಗೆ ಸೇರಸಲಾ ಅಂತ ಯೋಚನೆ ಬಂತು… ಹಾಗೆ ಯಾವುದಾದರು ಹಾಡು ಹೇಳಿದ್ರೆ…

ಹೀಗೆ, ಹತ್ತು ಹಲವು ಯೋಚ್ನೆ ಬರ್ತಾ ಇತ್ತು.

ಇಷ್ಟೆಲ್ಲ ಯೋಚ್ನೆ ಮಾಡ್ತಾ ಇರ್ಬೇಕಾದ್ರೆ, ಕುಕ್ಕರು ಕೂಗಿ ಆರಿತ್ತು. ಸರಿ ಬೆಂದ ಬೇಳೆಯನ್ನು ಕುಡುಗೋಲು ಇಲ್ಲದೆ ಕಡೆದು, ಸಾಸಿವೆ ಚಿಟುಕಿಸಿ, ಇಂಗನ್ನು ಸೇರಿಸಿ, ಹುಣಸೆಹಣ್ಣು ಕಿವುಚಿ, ಬೆಲ್ಲ ಮತ್ತು ಮೆಣಸಿನಪುಡಿಗಳನ್ನು ಹಾಕಿ ಕುದ್ದುಸ್ದೆ. ಅದು ಕುದೀಬೇಕಾದ್ರೆ, ಈ ಹಿಂದೆ ಮಾಡಿದ್ದ ಉಸುಲಿಯನ್ನು ಓವನ್ನಿನಲ್ಲಿ ಹಾಕಿ ಬಿಸಿ ಮಾಡಿ, ಮೊಸರನ್ನು ಈಚೆ ಇಟ್ಟೆ. ಕುದಿಯುತ್ತಿದ್ದ ಸಾರಿಗೆ ಒಂದು ಚೂರು ಕೊತ್ತಂಬರಿ ಸೊಪ್ಪನ್ನು ಸೇರಿಸುವುದು ಮರೆಯಲಿಲ್ಲ. ಅದು ಘಮ ಘಮ ಅಂತ ಇರ್ಬೇಕಲ್ಲ.

ಇಷ್ಟೆಲ್ಲ ಆದಮೇಲೆ, ನೋಡಿ. ಒಂದು ವಿಚಾರ ಹೇಳಲೇಬೇಕು. ಕನ್ನಡಿಗರು ತುಪ್ಪ ತಿನ್ನಲೇಬೇಕು. ಯಾಕೆ ಅಂತೀರಾ.. ನೋಡಿ, ಸೋಮೇಶ್ವರ ಶತಕದಲ್ಲಿ ಕವಿ ಹೇಳಿಬಿಟ್ಟಿದ್ದಾನೆ.

ಸುಡು ಸೂಪಂ ಘೃತಮಿಲ್ಲದೂಟವ, ಪರಾನ್ನಾಪೇಕ್ಷೆಯಾ ಜಿಹ್ವೆಯಂ,

ಸುಡು ದಾರಿದ್ರ್ಯದ ಬಾಳ್ಕೆಯಂ, ಕಪಟಕೂಟಂ ಮಾಳ್ಪ ಸಂಗಾತಿಯಂ,

ಸುಡು ತಾಂಬೂಲವಿಹೀನ ವಕ್ತ್ರವ, ಪರಸ್ತ್ರೀ ನೋಡುವಾ ಕಣ್ಗಳಂ

ನುಡಿಯಿಂ ತಪ್ಪುವ ರಾಜನಂ ಹರಹರಾ ಶ್ರೀ ಚೆನ್ನಸೋಮೇಶ್ವರಾ || ೨೮ ||

ಗೊತ್ತಾಯ್ತಾ…. ನೋಡಿ ಸೂಪಂ ಅಂದರೆ ಸಾರೇನೋ ತಯಾರಾಯ್ತು. ಸ್ವಲ್ಪ ಅನ್ನಕ್ಕೆ ಸಾರು ಮತ್ತು ತುಪ್ಪವನ್ನು ಕಲೆಸಿ, ಮಿಕ್ಕ ಅನ್ನವನ್ನು ಮೊಸರಿನೊಂದಿಗೆ ಕಲೆ

WhatsApp-Image-20160719

ಸಿ, ಒಂದು ತುತ್ತು ಸಾರು ಅನ್ನವನ್ನ ಬಾಯಿಗೆ ಇಟ್ಟೆ . ತಕ್ಷಣ …..ಅದೆಲ್ಲ ಕಳೆದುಹೋದೆ ಅಂತೀರಾ……. ….. ಇಷ್ಟು ಹೊತ್ತು ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡ್ಬೇಕು, ಅದೂ ಇದೂ ಅಂತ ಯೋಚ್ನೆ ಮಾಡಿದ್ದೆಲ್ಲ ನೀವಾಳಿಸುವಂತೆ, ತಕ್ಷಣ ನಮ್ಮಮ್ಮ ನೆನಪಾದ್ರು.

ಅರರೆ ಅರೆ, ನಮ್ಮ ಅಮ್ಮ ಮಾಡೋ ಸಾರಿನ ತರಹವೇ ಇದ್ಯಲ್ಲ. ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಸಾರು ಮಾಡಿದ ನಾನು ನಮ್ಮಮ್ಮ ಮಾಡೋ ರೀತೀನೇ ಮಾಡಿದ್ದೆ. ಸ್ವಲ್ಪ ಜಂಭ ಬಂತು ಅನ್ನಿ… ಆರಾಮಾಗಿ ತಿಂದೆ, ಮಜಾ ಮಾಡ್ದೆ.. ಒಂದು ತುತ್ತು ಸಾರುಅನ್ನ, ಅದರ ಜೊತೆ ಉಸುಲಿ ಚೂರ್-ಚೂರೇ ತಿಂತಾ ತಿಂತಾ ಮುಗಿಸಿದೆ. ಕಡೆಯಲ್ಲಿ ಮಜ್ಜಿಗೆ ಅನ್ನವನ್ನೂ ತಿಂದೆ ಅನ್ನಿ.

ಆದರೆ ಪುರಾಣ ಇಲ್ಲಿಗೆ ಮುಗೀಲಿಲ್ಲ.

ಸರಿ ಊಟ ಆಯ್ತು. ಇನ್ನೇನು ಸ್ವಲ್ಪ ಮಾತುಗೀತು ಆಡಿ, ಮಲಗೋಣ ಅಂತ ತೀರ್ಮಾನ ಮಾಡ್ದೆ. ಆಮೇಲೆ ಯೋಚ್ನೆ ಬಂತು. ಊಟ ಆದ ತಕ್ಷಣ ಮಲಗುವ ಬದಲು ಏನಾದರು ಮಾಡೋಣ. ಏನೋ ಮಡೋದು ಅಂತ ಯೋಚಿಸುತ್ತಿರುವಾಗ, ತಿರುಗಿ ನೋಡ್ದೆ. ಸಿಂಕ್ ತುಂಬ ಪಾತ್ರೆಗಳು. ಸರಿ ಇವನ್ನೆಲ್ಲ ತೊಳೆದು ಮಲಗೋಣ ಅಂತ ಪಾತ್ರೆಗಳನ್ನೆಲ್ಲ ತಿಕ್ಕೋಕ್ಕೆ ಶುರುಮಾಡಿದೆ. ಆಗ ಒಂದು ವಿಚಾರ ಹೊಳೀತು. ಅದೇನು, ಮೊ

IMG_20160719_220659197_HDR

ದಲನೇ ಬಾರಿಗೇ ಇಷ್ಟು ಚೆನ್ನಾಗಿ ಸಾರು ಮಾಡಿದ್ನೆಲ್ಲ, ಅದು ಹೇಗೆ ಸಾಧ್ಯವಾಯ್ತು ಅಂತ… ಆಮೇಲೆ ಗೊತ್ತಾಯ್ತು, ನಾನು ಮಾಡಿದ್ದರಲ್ಲಿ ಮಣ್ಣಂಗಟ್ಟಿ ಏನೂ ಇರಲಿಲ್ಲ. ಎಲ್ಲ ಸಾರಿಗೆ ಹಾಕುವ ಮೆಣಸಿನಪುಡಿಯ ಮಹಿಮೆ ಅಂತ. ಅಮ್ಮ ಮಾಡಿದ ಮೆಣಸಿನ ಪುಡಿ ಸರಿ ಇದ್ರೆ ತಾನೇ ಅಮ್ಮ ಮಾಡಿದ ಸಾರಿನ ರೀತಿ ನಾನು ಸಾರು ಮಾಡಲು ಸಾಧ್ಯ. ಆಗ ನಿಧಾನವಾಗಿ ತಲೆಗಿಳೀತು. ನನ್ನಿ ಸುನಿಲ, ನೀನು ಮೆಣಸಿನಪುಡಿ ಯಾವಾಗ ಮಾಡ್ತೀಯೋ ಅವತ್ತು ನೀನು ಒಳ್ಳೆ ಅಡುಗೆಭಟ್ಟ ಆಗ್ತೀಯಾ ಕಣೋ ಅಂತ…ಸರಿ ಬಿಡಪ್ಪಾ… ಅಂತ ಯೋಚಿಸ್ತಿರುವಾಗ, ಅಲ್ಲ ಪಾಪ ನಮ್ಮಮ್ಮ ಸಿಂಕ್ ಇಲ್ಲದಿದ್ದ ಕಾಲದಲ್ಲೂ ಎಷ್ಟೆಲ್ಲ ಪಾತ್ರೆ ಒಬ್ರೇ ತೊಳೀತಿದ್ರಲ್ಲಾ… ಛೆ, ಅವಾಗೆಲ್ಲ ನಾನು ಸಹಾಯ ಮಾಡ್ಬೇಕಿತ್ತು ಅಂತ ಮತ್ತೊಮ್ಮೆ ನಮ್ಮಮ್ಮ ನೆನಪಾದ್ರು.

ಸೋ, ಗೆಳೆಯರೇ, ನೀವು ಕೂಡ ನಿಮ್ಮಮ್ಮ ನೆನಪಾದಾಗ, ಅವರು ನಿಮಗೆ ಮಾಡಿಕೊಡ್ತಾ ಇದ್ದ, ರುಚಿರುಚಿಯಾದ ಅಡುಗೆಗಳನ್ನು ಮಾಡ್ಕೊಂಡು ಸವಿಯಿರಿ. ಆಮೇಲೆ, ಪಾತ್ರೆ ತೊಳೆಯೋದು ಮರೀಬೇಡಿ. 😉

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s