ಗಿರಿಕನ್ಯೆ ಸಿನಿಮಾದಲ್ಲಿ ಒಂದು ಹಾಡಿದೆ.

ಕೂಡಿಬಾಳೋಣ ಎಂದೆಂದೂ ಸೇರಿ ದುಡಿಯೋಣ, ದುಡಿಮೆಯೇ ಬಡತನ ಅಳಿಸಲು ಸಾಧನ,

ಎಂದು ನಾವು ಒಂದೆಂದು ಕೂಗಿ ಹೇಳುವ, ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ…

ಇದ್ದಕ್ಕಿದ್ದ ಹಾಗೆ ಈ ಹಾಡು ಯಾಕಪ್ಪಾ ನೆನಪಾಯ್ತು ಅಂತ ಯೋಚ್ನೆ ಮಾಡೋಕ್ಕೆ ಶುರುಮಾಡಿದೆ. ಮೊನ್ನೆ ಅದೇ ಹೇಳ್ತಾ ಇದ್ನಲ್ಲ, ದೋಸೆ ಮಾಡಿದ್ದೆ ಅಂತ, ದೋಸೆಗೆ ನೆಂಚ್ಕೊಳೋಕ್ಕೆ ಅಂತ ಈರುಳ್ಳಿ ಆಲೂಗಡ್ಡೆ ಪಲ್ಯ ಮಾಡಿದ್ದೆ. ದೋಸೆಗೆ ಈರುಳ್ಳಿ ಆಲೂಗಡ್ಡೆ ಪಲ್ಯ ಇದ್ದರೇನೇ ಸೊಗಸು, ನೋಡಿ. ಮನೆಯಲ್ಲಿ ಏನಾಗತ್ತೆ ಅಂದ್ರೆ ನಮ್ಮಮ್ಮ ಎಲ್ಲರಿಗೂ ಆಗುವಷ್ಟು ಪಲ್ಯ ಮಾಡ್ಬಿಟ್ಟು, ಆಮೇಲೆ ಬಡಿಸುವಾಗಲೇ ಪರೋಕ್ಷ ಎಚ್ಚರಿಕೆ ಕೊಡ್ತಾರೆ. “ಅವನು ಯಾಕೋ ಇನ್ನೂ ಎದ್ದಿಲ್ಲ, ಇವಳದ್ದು ಇನ್ನೂ ಸ್ನಾನ ಆಗಿಲ್ಲ” ಅಂತ. ನಾವು ಅದನ್ನು ಹೇಗೆ ಅರ್ಥ ಮಾಡ್ಕೋಬೇಕು ಅಂದ್ರೆ, “ದೋಸೆ ಎಷ್ಟು ಬೇಕಾದ್ರೂ ಕೊಡ್ತೀನಿ, ಪಲ್ಯ ಸಾಲದು ಬಂದ್ರೆ, ಚಟ್ನಿಪುಡಿ ಹಾಕ್ಕೋಬೇಕು” ಅಂತ. ನಮ್ಮಮ್ಮ ಎಲ್ಲರಿಗೂ ಸಮವಾಗಿ ಹಂಚ್ಬೇಕು ಅಂತ ಆಗಲೇ ಕಣ್ಣಂದಾಜು ಮಾಡಿರ್ತಾರೆ. ಆದರೂ ನಾವುಗಳು ನಂಗೆ ಇನ್ನೊಂದ್ಸ್ವಲ್ಪ ಬೇಕು, ಅಂತ ಹಠ ಮಾಡಿ ಹಾಕಿಸಿಕೊಳ್ತೀವಿ. ಆಮೇಲೆ, ಪಾಪ ನಮ್ಮಮ್ಮ ಅವರಿಗಿಟ್ಟುಕೊಳ್ಳದೇ ನಮಗೆ ಕೊಡ್ತಾರೆ, ಅದು ಬೇರೆ ವಿಷಯ ಬಿಡಿ.

ಮೊನ್ನೆ ಹೀಗೆ, ಹೇಗಿದ್ರೂ ನಾನೊಬ್ನೇ ಅಲ್ವಾ ತಿನ್ನೋದು… “ಮನೇಲಿ ಸ್ವಲ್ಪ ಸ್ವಲ್ಪಾನೇ ಪಲ್ಯ ಸಿಗ್ತಾ ಇತ್ತು, ಈಗ ಒಬ್ನೇ ಅಷ್ಟೂ ತಿನ್ಬೋದು”, ಅಂತ ಜಾಸ್ತಿ ಪಲ್ಯ ಮಾಡೋಣ ಅಂತ ಮಾಡ್ದೆ…

ಪಲ್ಯ ಏನೋ ಚೆನ್ನಾಗಿಯೇ ಇತ್ತು. ಆದರೆ ಏನ್ ಗೊತ್ತಾ ಮಜಾನೇ ಬರ್ಲಿಲ್ಲ. ಯಾಕೆ ಅಂತೀರಾ. ನಮ್ಮಮ್ಮ “ಪಲ್ಯ ಇಲ್ಲ” ಎಂದಾಗ, “ಅವನಿಗೆ ಎಷ್ಟು ಇಟ್ಟಿದ್ದೀರಾ ತೋರ್ಸಿ” ಅಂತ ಕ್ಯಾತೆ ತೆಗೀಬೋದಿತ್ತು. ಆಮೇಲೆ, ನಮ್ಮಮ್ಮನ ಕೈಲಿ ಚೆನ್ನಾಗಿ, “ಹಾಗೆಲ್ಲ ಕೇಳ್ಬಾರ್ದು , ನಿಂಗೆ ಎಷ್ಟು ಬೇಕೋ ಅಷ್ಟು ಹಾಕಿಸಿಕೊಳ್ಳಬೇಕು, ಹಾಗೆ ಹೀಗೆ” ಅಂತ ಬೈಸಿಕೊಳ್ಳಬಹುದಿತ್ತು. ಬೈಸಿಕೊಂಡರೇನೇ ತಿಂದ ದೋಸೆ ಜೀರ್ಣವಾಗ್ತಾ ಇತ್ತು.

ಈಗ ನಾನಿರುವ ಜಾಗದಲ್ಲಿ ಸದ್ಯಕ್ಕೆ, “ಅವನಿಗೆ ಜಾಸ್ತಿ, ನನಗೆ ಕಮ್ಮಿ” ಅಂತ ಒಣಜಗಳ ಮಾಡಿ ಹುಸಿಸಿಟ್ಟುಮಾಡಿಕೊಳ್ಳುವ ಪ್ರಮೇಯವೇ ಇಲ್ಲ.

ಸರಿ, ಸಿಕ್ಕಾಪಟ್ಟೆ ಮಾಡ್ಕೊಂಡು ಒಬ್ನೇ ತಿನ್ನೋದಕ್ಕಿಂತ, ಸ್ವಲ್ಪವೇ ಮಾಡ್ಕೊಂಡು ನಮ್ಮಮ್ಮ ಮಾಡೋ ತರಹ, ಕಡೇಪಕ್ಷ ಒಬ್ಬರಿಗಾದ್ರೂ ಹಂಚೋಣ ಅಂತ, ಸ್ನೇಹಿತನನ್ನು ದೋಸೆ ಕೊಡ್ತೀನಿ ಬಾರೋ ಅಂತ ಕರೆದೆ. ಆಗ ಮನಸ್ಸಿಗೆ ಸ್ವಲ್ಪ ಸಮಾಧಾನ ಆಯ್ತು….

ಸರಿ, ಈಗ ಸದ್ಯಕ್ಕೆ ಹಾಡು ನೋಡಿ.

Advertisements