ಇದನ್ನು ನಾನು ಬರೆದದ್ದು, ಏಪ್ರಿಲ್ ೮ ೨೦೦೬ರಲ್ಲಿ, ಅಂದರೆ ಸರಿಸುಮಾರು ಹನ್ನೆರೆಡು ವರ್ಷಂಗಳ ಹಿಂದೆ, ಸಂಪದದಲ್ಲಿ.

ಉಫ್….ಏನು ಹೇಳಬೇಕೊ ತಿಳಿಯುತ್ತಿಲ್ಲ, ಮತ್ತೊಂದು ಮನೆ ಸಾಗಾಟ/ಬದಲಾಟ ಪ್ರಾರಂಭವಾಗಿದೆ. ನನಗೆ ತಿಳಿವು ಮೂಡಿದಾಗಿನಿಂದ ಇದು ನಾವು ೮ನೇ ಬಾರಿ ಮನೆ ಬದಲಾಯಿಸುತ್ತಿರುವುದು(೪ ಊರುಗಳು). ಸುಮಾರು ಊರೂರು ಅಲೆದು ನಮ್ಮ ಹೆಮ್ಮೆಯ, ಪ್ರೀತಿಯ ಬೆಂಗಳೂರಿನಲ್ಲಿಯೇ (ಹೌದು ಇದು ನಮ್ಮ ಹೆಮ್ಮೆಯ ಬೆಂಗಳೂರು, ಟ್ರಾಫಿಕ್ ಸಮಸ್ಯೆ ಇರಲಿ ಇಲ್ಲದಿರಲಿ) ಬೆರೆತು ಹೋದ ಮೇಲೆ ಇದು ಐದನೆಯ ಬದಲಾವಣೆ. ಏನೇ ಹೇಳಿ ಈ ಮನೆ ಬದಲಾಯಿಸೋದು ಕಷ್ಟವಾದರೂ ಸಹ ಬಹಳ ಮಜಾ ಕೊಡತ್ತೆ, ಆ!!! ನೀವೇ ಸಾಗಿಸಿದರೆ ಮಾತ್ರ, ಆಳುಗಳನ್ನಿಟ್ಟು ಕೊಂಡಲ್ಲ ಮತ್ತೆ.

ಕೇವಲ ನಮ್ಮನೆಯಲ್ಲದೆ ಚಿಕ್ಕಪ್ಪ ನ ಮನೆ, ದೊಡ್ಡಪ್ಪಂದಿರ ಮನೆ, ಮಾವನ ಮನೆ, ಸ್ನೇಹಿತರ (ಸ್ನೇಹಿತೆಯರನ್ನು ಹೊರತು ಪಡಿಸಿ) ಮನೆ, ಸ್ನೇಹಿತನ ಚಿಕ್ಕಪ್ಪನ ಮನೆ, ಸ್ನೇಹಿತನ ಭಾವನ ಮನೆ, ಸ್ನೇಹಿತನ ಭಾವನ ಸೋದರಮಾವನ ಮನೆ, ಹೀಗೆ ಸುಮಾರು ೧೮-೨೦ ಮನೆ ಸಾಗಿಸುವುದರಲ್ಲಿ ನನ್ನ ಕೈವಾಡವಿದೆ (ಅಲ್ಲಲ್ಲ..ಕ್ಷಮಿಸಿ….ಕೈಚಳಕ, ಛಾಪು). ಈಗ ನನ್ನ ಕೆಲವು ಸ್ನೇಹಿತರು “I proclaim myself to be J2EE Architect, SAP consultant” ಅಂತ ಬ್ಲಾಗಿಸ ತೊಡಗಿದ್ದಾರೆ. ಅವರ ತರಹ ನಾನೂ ಸಹ ಆ ರೀತಿ ಬ್ಲಾಗಿಸಬೇಕು ಎಂದು ಬಯಸುತ್ತಿದ್ದಾಗ, ಹೊಳೆಯಿತು ನೋಡಿ. Now, I proclaim myself to be ಮನೆಸಾಗಿಸುವ ನಿಷ್ಣಾತ.

ಹೌದು ಕಣ್ರಿ ಎಷ್ಟು ಕಷ್ಟದ ಕೆಲಸ ಇದು. ಮನೆಯಲ್ಲಿರುವ ಪಾತ್ರೆಗಳನ್ನು ತೊಳೆದು, ಒರೆಸಿ, ಅದರದರ ಆಕಾರಗಳಿಗೆ ತಕ್ಕಂತೆ ಒಂದರ ಒಳಗೊಂದು ಹಾಕಿ ಮುಚ್ಚಿಡಬೇಕು. ಹಾಸಿಗೆಗಳನ್ನು ದಾರ ಹಾಕಿ ಕಟ್ಟಿಡಬೇಕು, ಮಂಚಗಳನ್ನು ಬಿಚ್ಚಿಡಬೇಕು. ಬೀರು/ಕಪಾಟಿನಲ್ಲಿರುವ ಬಟ್ಟೆಗಳನ್ನು ದೊಡ್ಡ ಪಂಚೆಯಲ್ಲೋ/ಕಾರ್ಪಸ(ಕಾಟನ್) ಸೀರೆಯಲ್ಲೋ ಹಾಕಿ ಕಟ್ಟಿಡಬೇಕು, ಎಷ್ಟು ಸಾಧ್ಯವೋ ಅಷ್ಟು ಆಹಾರ ಸಂಬಂಧಿ ಪದಾರ್ಥಗಳನ್ನು ಖಾಲಿ ಮಾಡಬೇಕು ಇಲ್ಲವಾದರೆ ಅನವಶ್ಯಕ ಹೊರೆಯಾಗುವುದು. ಕಂಪ್ಯೂಟರ್, ಟಿ.ವಿ. ಸ್ಪೀಕರ್, ರೇಡಿಯೋ, ಇವುಗಳ ಮೇಲೆ ಕುಳಿತಿರುವ ಧೂಳನ್ನು ಅಂದು ಕೊಡವಲೇಬೇಕು.

ಈ ಮನೆಸಾಗಿಸುವ ಆಟದಲ್ಲಿ ಸಹಾಯ ಮಾಡಿದರೆ ನಮಗೆ ಸಿಗುವ ಪ್ರಯೋಜನಗಳು.

೧. ಯಾವತ್ತೂ ಬರದ ನೆಂಟರು(ಆಕ್ಷೇಪಣೆಯಲ್ಲ ಮತ್ತೆ), ಸ್ನೇಹಿತರು ಅಂದು ಬಂದು ಸಹಾಯ ಮಾಡುತ್ತಾರೆ.

೨. ಮನೆ ಸಾಗಿಸಿದ ನಂತರ ಸೊಗಸಾದ ಊಟ ಇಲ್ಲವೇ ಪಾನಕ ಇಲ್ಲವೇ ಹಣ್ಣಿನ ರಸ(ರಸ್ನಾ, ಎಳನೀರು, ರೂಹಫ್ಸಾ) ಇಲ್ಲವೇ ಎಲ್ಲವೂ ಸಿಗುತ್ತದೆ. ಕೊಡಿಸುವವರ ಜೇಬಿಗೆ ಕತ್ತರಿ, ಮೆಲ್ಲುವವರಿಗೆ ರಸದೂಟ.

೩. ಯಾರು ಮೊದಲು ಒಳಗಡೆ ಹೋಗುವುದು ಎಂದು ಜಗಳ + ಆಟವಾಡಬಹುದು.

೪. ಯಾರಿಗೂ ಗೊತ್ತಿಲ್ಲದ ಮನೆಯ ರಹಸ್ಯ ಜಾಗಗಳು ಮನೆ ಸಾಗಿಸುವವರಿಗೆ ತಿಳಿಯುವುದು.

೫. ಎಷ್ಟು ಬೇಕಾದರೂ ಕಿರುಚಬಹುದು, ಅರಚಬಹದು. ನಮ್ಮ ಪ್ರತಿಧ್ವನಿ ಕೇಳಿ ನಾವೇ ಖುಷಿಪಡಬಹುದು.

೬. ಹೊಸ ಜನರ ಪರಿಚಯವಾಗಿ, ಹೊಸ ಜನರ ಮಾತುಗಳನ್ನು ಕೇಳಬಹುದು.

೭. ಹೊಸ ಗೆಳೆಯ ಗೆಳತಿಯರನ್ನು ಭೇಟಿ ಮಾಡಿ, ಅವರ ಬಡಾವಣೆಯಲ್ಲಿ ಎಲ್ಲಿ ಆಟವಾಡುತ್ತಾರೆ, ಯಾವ ರೀತಿಯ ರೀತಿ ರಿವಾಝುಗಳು ಇವೆ ಎಂದು ತಿಳಿಯಬಹುದು. ಅ. ಆ ಹೊಸ ಜಾಗದಲ್ಲಿ ಯಾವ ಆಟ ಹೆಚ್ಚಾಗಿ ಆಡುವರು.ಆ. ಈ ತಿಂಗಳು ನನ್ನ ರಬ್ಬರ್ ಬಾಲ್ ನಲ್ಲಿ ಕ್ರಿಕೆಟ್ ಆಡಿದರೆ, ಮುಂದಿನ ತಿಂಗಳು ಯಾರದ್ದು,ಇ. ಬಾಲ್ ಕಳೆದುಹೋದರೆ / ಒಡೆದುಹೋದರೆ ಈ ಏರಿಯಾದಲ್ಲಿ ಏನು ಮಾಡುತ್ತಾರೆ. ಈ. ಯಾವ ಮನೆಯವರು ಬೈಯ್ಯುತ್ತಾರೆ, ಯಾರಿಗೆ ಮಕ್ಕಳೆಂದರೆ ಪಂಚಪ್ರಾಣ.ಉ. ಯಾರು ಯಾರು ಆಟದಲ್ಲಿ ಮೋಸಮಾಡುತ್ತಾರೆ. ಊ. ಯಾರು ಅತಿ ಹೆಚ್ಚು ಅಂಕ ಪಡೆಯುತ್ತಾರೆ. ಸ್ವಲ್ಪ ದೂರ ಇರಬೇಕಲ್ಲವೇ ಅವನಿಂದ/ಅವಳಿಂದ. ಋ. ಯಾರ ಮನೆಯಲ್ಲಿ ಹಬ್ಬ ಹರಿದಿನಗಳು ಹೆಚ್ಚಾಗಿ ನಡೆಯುತ್ತವೆ. ತಿಳಿದು ಅವರ ಮನೆಗೆ ಆಗಾಗ ಹೋಗಿ ಎನನ್ನಾದರು ತಿನ್ನಬಹುದಲ್ಲ. ೠ. ಯಾವ ಸ್ಕೂಲು ತುಂಬಾ ಶಿಸ್ತು ಎಂದು ಕೇಳಬಹುದು. ಕೇಳಿ ಆ ಶಾಲೆಗೆ ಹೋಗುವುದಿಲ್ಲ ಎಂದು ಹಠಮಾಡಬಹುದು.

೮. ಈ ದಿನವಷ್ಟೇ ಪಕ್ಕದ ಮನೆಗೆ ಬಂದಿದ್ದೇವೆ ಎಂದು ಹೇಳುತ್ತಾ ಪಕ್ಕದ ಮನೆಯ ಬಿಟ್ಟಿ ಕಾಫಿಯೋ, ನೀರೋ ಸವಿಯುತ್ತಾ ಅವರ ಮನೆಗೂ ಸಹ ಲಗ್ಗೆ ಇಡಬಹುದು.

೯. ಮನೆಯಲ್ಲಿರುವ ಪಾತ್ರೆಗಳ, ಪುಸ್ತಕಗಳ, ದೇವರ ಪಟ(ಫೋಟೋ)ಗಳ, ಲೆಕ್ಕ ಸಿಗುವುದು.

೧೦. ಬೇಡದ ವಸ್ತುಗಳ ವಿಲೇವಾರಿಯಾಗಿ ಗೋಲ್ಕಕ್ಕೆ ಹಾಕಲು ದುಡ್ಡು ಸಿಗುವುದು.

೧೧. ಅದೆಲ್ಲಕ್ಕಿಂತ ಮುಖ್ಯವಾಗಿ ಮಾತಿಗೆ ಮುಂಚೆ ಜಾವಾ, ಸಿ, ಸಿ++, ಸೀಶಾರ್ಪು, ಆರಕಲ್, ಮೈಸೀಕ್ಯುಯಲ್, ಬ್ಲಾಗು, ಮೇಯ್ಲು, ಎಕ್ಲಿಪ್ಸು, ನೆಟ್ ಬೀನ್ಸು, ಪ್ಲಗಿನ್ನು, ಸೋಲಾರಿಸ್ಸು, ವಿಂಡೋಸು, ಲಿನಕ್ಸು, ಪ್ರಾಡಕ್ಟು, ಸರ್ವೀಸು, ಡೆಡ್ಲೈನು ಎಂದೆಲ್ಲ ಮಾತನಾಡುವವರಲ್ಲದೆ ಬೇರೆ ಜನರ ಒಡನಾಟವೂ ದೊರಕುವುದು. ಆರಕಲ್ ನಲ್ಲಿನ ಸ್ನೇಹಿತನೂ ಸಹ ಆದಿನ ಆರಕಲ್ ಬಗ್ಗೆ ತುಟಿಕ್ ಪಿಟಿಕ್ ಎನ್ನದೆ ವರಳಕಲ್ಲು ಸಾಗಿಸುತ್ತಾನೆ (ಇದ್ದರೆ..)

೧೨. ಸ್ಹೇಹಿತರು, ಸಮಾನ ವಯಸ್ಕ ಮನಸ್ಕ ನೆಂಟರು ಜೊತೆಗೂಡಿ ವಾನ್ ನಲ್ಲಿ ಕನ್ನಡ ಅಂತ್ಯಾಕ್ಷರಿ ಆಡಬಹುದು.

೧೩. ಸಿಕ್ಕಾಪಟ್ಟೆ ಸಾಮಾನು ಎತ್ತಿ, ಕೈಲಾಗದಿದ್ದರೂ, ಶಕ್ತಿ ಪ್ರದರ್ಶನ ನಡೆಸಿ, ಹಿರಿಯರ ಬಾಯಲ್ಲಿ ಯಪ್ಪಾ ಎಷ್ಟು ಒಳ್ಳೆಯವನು, ಒಂಚೂರು ಜಂಭ ಇಲ್ಲ ಅಂತ ಹೊಗಳಿಸಿಕೊಳ್ಳುತ್ತಾ ಸ್ಕೋಪು ತೊಗೊಳ್ಳಬಹುದು.

ಬಡಾವಣೆಯಿಂದ ಬಡಾವಣೆಗೆ ಸಾಗಿಸುವುದಕ್ಕಿಂತ, ಊರಿನಿಂದ ಊರಿಗೆ ಸಾಗಿಸುವುದು ಅತ್ಯಂತ ಮೋಜಿನ ಕೆಲಸ. ವಾನ್ ನಲ್ಲಿ ಹೋಗುತ್ತಿರುವಾಗ ಅಲ್ಲೊಬ್ಬ ಚಡ್ಡಿಹಾಕೊಂಡಿರುವವನನ್ನು ಓಯ್, ಚಡ್ಡಿ ಏನ್ ಸಮಾಚಾರ, ಆಯ್ತಾ ಊಟಾ ಎಂದು ರೇಗಿಸಬಹುದು. ಅವನು ಹುಸಿ ಮುನಿಸು ತೋರ್ಪಡಿಸುವನು. ಸ್ವಲ್ಪ ಎತ್ತರವಾಗಿದ್ರೆ, ಏನ್ ಕರ್ಟ್ಲಿ ಆಂಬ್ರೋಸ್ ಮದುವೆ ಆಯ್ತಾ ಎಂದು ಕೇಳಬಹುದು. ಆತ, ಸುಭಾಷ್ ಚಂದ್ರ ಬೋಸ್ ಗೊತ್ತು, ಯಾರಿವ ಕಟ್ಟಿ ಆಂಬ್ರೋಸ್ ಎಂದು ಯೋಚಿಸುತ್ತಿರವಾಗಾಲೇ ಅಷ್ಟು ದೂರ ಹೋಗಿಬಟ್ಟಿರುತ್ತೇವೆ. ಕುಳ್ಳಗಿದ್ರೆ, ಗವಾಸ್ಕರ್ ಎನ್ನಬಹುದು. ಓಡ್ತಾ ಇದ್ರೆ, ಕಪಿಲ್ ದೇವ್ ಎಂದು ಕೂಗಬಹುದು. ಮಕ್ಕಳಿಗೆ, ಅಂಕಲ್ ಆಂಟಿಗಳಿಗೆ. ಟಾಟಾ ಮಾಡಬಹುದು. ಬಹಳ ಖುಷಿಯಾಗುತ್ತದೆ ಅವರಿಗೆ. ಆಯಾಸವಾದಾಗ ಹೊಲದಲ್ಲಿ ಕೆಲಸ ಮಾಡುತ್ತಿರುವವರನ್ನು ಮಾತನಾಡಿಸಿ ನೀರು ಕುಡಿಯಲು ಕೇಳಬಹುದು. ಯದ್ವಾ ತದ್ವಾ ಕಿರುಚಾಡಬಹುದು. ಅತ್ಯಂತ ಸುಮಧುರ ರಾಗದಲ್ಲಿ ಹಾಡಬಹುದು.

ಈ ಮೇಲಿನ ಕಾರಣಗಳಿಂದಾಗಿ ನನ್ನ ಹಲವು ಸ್ನೇಹಿತರಿಗೆ ನನ್ನನ್ನು ಕಂಡರೆ ಬಹಳ ಹೊಟ್ಟೆಕಿಚ್ಚು, ಏಕೆಂದರೆ ಅವರು ಹುಟ್ಟಿದಾಗಿನಿಂದ ಅದೇ ಮನೆ, ಎಲ್ ಕೆ ಜಿ ಇಂದ – ಪಿಯುಸಿ ರವರೆಗೆ ಒಂದೇ ಶಾಲೆಯಲ್ಲಿ/ಸಂಸ್ಥೆಯಲ್ಲಿ ಓದಿದವರು. ಹೇಗಿದೆ ನೋಡಿ ನನ್ನ ಅದೃಷ್ಟ.

ಹಾ!…ಒಂದು ಮಾತು ಸ್ಪಷ್ಟ ಪಡಿಸಿಬಿಡುತ್ತೇನೆ. ನನ್ನ ನೈಪುಣ್ಯತೆ ಇರುವುದು ಮನೆ ಎತ್ತಂಗಡಿ ಮಾಡುವುದರಲ್ಲಲ್ಲ, ಮನೆ ಬದಲಾವಣೆ ಮಾಡುವುದರಲ್ಲಿ ಅಷ್ಟೆ.

Advertisements