ಮೊನ್ನೆ, ಹೀಗೆಯೇ ಒಂದಷ್ಟು ದಿನಸಿ ಸಾಮಾನು ತರಲು ಹೋಗಿದ್ದೆ. ಇಲ್ಲಿ, ಬೆಂಗಳೂರಿನಲ್ಲಿ ಇರುವ “ಮೆಟ್ರೋ” ಮಳಿಗೆಯ ರೀತಿ “ಕಾಸ್ಟ್ಕೋ” ಎಂಬ ದೊಡ್ಡ ಹೋಲ್ಸೇಲ್ ಮಾಲ್ ಇದೆ. ಇಲ್ಲಿ ಯಾವುದೂ ಕಡಿಮೆ ಪ್ರಮಾಣದಲ್ಲಿ ಸಿಗುವುದಿಲ್ಲ. ಅಮೇರಿಕಾದಲ್ಲಿ, ಅದರಲ್ಲಿಯೂ ನಾನಿರುವ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ, ಎಷ್ಟೋ ಹಣ್ಣುಗಳು ಮೆಕ್ಸಿಕೋ ದೇಶದಿಂದ ಬರುತ್ತದೆ. ಸ್ಥಳೀಯವಾಗಿಯೂ ಅನೇಕ ಬಗೆಯ ಹಣ್ಣುಗಳು

ataulfo-mango

ಸಿಗುತ್ತವೆ, ಅನ್ನಿ. ಅಂದು, ಈ ಮಾವಿನಹಣ್ಣು ಕಣ್ಣಿಗೆ ಬಿತ್ತು. ನಾನು ಇಲ್ಲಿಗೆ ಬಂದಾಗಿನಿಂದ ಭಾರತದ ಮಾವಿನಹಣ್ಣನ್ನು ಸವಿಯಲು ಸಾಧ್ಯವಾಗಿಲ್ಲ. ಇಲ್ಲಿನ ಭಾರತೀಯ ದಿನಸಿ ಅಂಗಡಿಗಳಲ್ಲಿ ಬೇಸಗೆಯ ಸಮಯದಲ್ಲಿ ಭಾರತದಿಂದ ಆಮದಾದ ಮಾವಿನಹಣ್ಣುಗಳನ್ನು ಇಟ್ಟಿರುತ್ತಾರೆ, ಆದರೆ ಅದೇಕೋ “ಕೊಳ್ಳಬೇಕು” ಎಂಬ ಮನಸ್ಸು ಬಂದಿಲ್ಲ. “ಒಂದೊಂದು ಕೊಳೆತು ಹೋಗಿರತ್ತೆ”, “No Exchange”, “ಕೆಲವೊಂದು ಸುಕ್ಕಾಗಿರತ್ತೆ”, “ತುಂಬಾ ದಿನ ಆಗಿರತ್ತೆ”, “ರುಚಿ ಅಷ್ಟು ಚೆನ್ನಾಗಿಲ್ಲದಿದ್ದರೆ” — ಏನೋ ಒಂದು ನೆಪ. ಅದೂ ಅಲ್ಲದೆ, ಆಲ್ಫಾನ್ಸೋ ಬಗೆಯ ಹಣ್ಣುಗಳು ಮಾತ್ರವೇ ಸಿಗುತ್ತದೆ. ರಸಪೂರಿ, ತೋತಾಪುರಿ ಮುಂತಾದವು ಸಿಗುವುದಿಲ್ಲ.

ಯಾವುದಕ್ಕೂ ಒಮ್ಮೆ ಇಲ್ಲಿಯ ಹಣ್ಣಿನ ರುಚಿಯನ್ನು ಸವಿಯೋಣ ಅಂತ ಕೊಂಡುತಂದೆ. ಇದರ ಹೆಸರು, ATAULFO. ಆರು ಹಣ್ಣುಗಳಿಗೆ 5.49$. ಭಾರತದ ಮಾವಿನಹಣ್ಣಿನ ರುಚಿಯನ್ನು ಹತ್ತಿಸಿಕೊಂಡವರಿಗೆ ಇದು ಸಪ್ಪೆ ಅನಿಸುತ್ತದೆ. ಆದರೆ ಇಷ್ಟಾದರೂ ಸಿಕ್ಕಿತಲ್ಲ ಅಂತ ಸಮಾದಾನ ಮಾಡ್ಕೊಂಡು ಮುಂದೆ ನಡೆದದ್ದಾಯಿತು.

Advertisements